Sunday 7 August 2016

ಕರ್ಣನಾರೆಂದ .....?




                                                       ಕರ್ಣನಾರೆಂದ .....?
ಭಗವಾನ್   ವೇದವ್ಯಾಸ ನ   ರಚನೆಯೇ   ವಿಷಿಷ್ಟವಾದದ್ದು . ಪ್ರಮುಖಪಾತ್ರಗಳು  ದ್ವಿಗುಣವನ್ನು  ಅಳವಡಿಸಿಕೊಂಡಿದೆ. 
ನಾಯಕನಲ್ಲಿ -ಖಳನಾಯಕತ್ವ , ಖಳನಾಯಕನಲ್ಲಿ -ನಾಯಕತ್ವ ,ವೈರಿಯಲ್ಲಿ  ಸ್ನೇಹತ್ವ ,ದಾಯಾದಿಗಳಲ್ಲಿ ವೈರತ್ವ ... 

ಕರ್ಣ ಪರ್ವ ದಲ್ಲಿ  ಕರ್ಣ ತನ್ನ ದಾಯಾದಿಯೇನೋ  ಎಂಬ  ಸಂಶಯವನ್ನ ಅರ್ಜುನ  ಕೃಷ್ಣನಲ್ಲಿ ಕೇಳುವ  ಒಂದು ಸನ್ನಿವೇಶ... 

         ದೇವ ಹಗೆಯಾಗಿರನು ಕರ್ಣನಿ
         ದಾವ ಹದನೆಂದರಿಯೆ ಮನದಲಿ
         ನೋವು ಮಿಗುವುದು ಕೈಗಳೇಳವು ತುಡುಕುವೆಡೆ ಧನುವ
          ಜೀವವೀತನಮೇಲೆ ಕರಗುವು
         ದಾವ ಸಖನೋ  ಶತ್ರುವೆಂಬೀ
         ಭಾವನೆಯ  ಬಗೆ ಬೀಳುಕೊಂಡುದು ಕರ್ಣನಾರೆಂದ ....?
******************************************
ದೇವಾ  ಈತ   ನಮಗೆ  ವೈರಿಯಾಗಿರನು ,ಯಾವ ಬಂಧ  ಎಂದು  ಅರಿಯೆ ,ಈತನ ಮೇಲೆ ಅನುಕಂಪ ಇದೆ ,ಈತನ ಮೇಲೆ  ಬಾಣ ಹೂಡಲು ಕೈಗಳು ಮೇಲೇಳುತ್ತಿಲ್ಲ ...ಇವನು ಯಾಕೆ ನಮ್ಮ ಶತ್ರು ಎಂದು  ಶಂಕೆ ಉಂಟಾಗಿದೆ... ಕೃಷ್ಣ ಕೃಪೆ ತೋರು  ಯಾರು ಈ ಕರ್ಣ? ಈತ ನನ್ನ ಸೋದರ  ಸಂಬಂಧಿಯೇ ..?ಕೃಷ್ಣ  ಹೇಳು ನಿಜವಾಗಿ ಈ ಕರ್ಣ ಅಂದರೆ ಯಾರು? ಆತನಿಗೂ ನನಿಗೂ ಏನು ಸಂಬಂಧ?
******************************************
        ಕೌರವನ ಮೇಲಿಲ್ಲದಗ್ಗದ
        ವೈರವೀತನ ಮೇಲೆ  ನಮಗಪ
        ಕಾರಿಯೀತನು ಮರಣದ ನುಸಂಧಾನವಿನ್ನೆಬರ
        ವೈರವುಪಶಮಿಸಿತು  ಯುಧಿಷ್ಠಿರ
        ವೀರನಿಂದಿಮ್ಮಡಿಯ ನೇಹದ
        ಭಾರವೆಣೆ ತೋರುವುದಿದೇನೈ  ಕರ್ಣನಾರೆಂದ ..?
******************************************
ಕೌರವನ ಮೇಲೆ ಇಲ್ಲದ ವೈರತ್ವ ಇವನಲ್ಲಿ ಇತ್ತು  .ಕರ್ಣನ ಕೊಲ್ಲದೆ   ಗಾಂಢೀವ  ಧನಸ್ಸನ್ನ ವಿಶ್ರಾಂತಿಯಲ್ಲಿಡಲಾರೆನು  ಎಂದು ಪ್ರತಿಜ್ಞೆ ಮಾಡಿದವನು  ನಾನು .ನನ್ನ ಪ್ರತಿಜ್ಞೆಯನ್ನ "ರಾಜಿ " ಮಾಡಿಕೊಳ್ಳಲಾ..?ಯುಧಿಷ್ಠಿರ ವೀರನ ಒಂದು ಹನಿ ರಕ್ತ ಧರೆಗಿಳಿದರೆ ,ರಕ್ತ ಧರೆಗಿಳಿಸಿದವನ ಯಮಪುರಿಗಟ್ಟುವೆನೆಂದು ಶಪಥ ಮಾಡಿದವನು ನಾನು  ಆ ಶಪಥವನ್ನ   ಯುಧಿಷ್ಠಿರ ವೀರ ನ  ಬದಲು  ಕರ್ಣ ವೀರ  ಎಂಬ  ಹೆಸರಿಗೆ ಎಂದು  ಬದಲಿಸಲಾ.?ಕೃಷ್ಣ ದೇವಾ ಹೇಳು ಈ ಕರ್ಣ   ಯಾರು ? ಯುಧಿಷ್ಠಿರ ವೀರ ನಿಂದಲೂ  ಹತ್ತಿರದವನಾ..? ನನಗೆ ಅನುಕಂಪ ಬರುತ್ತಾ ಇದೆಯಲ್ಲಾ?
******************************************
 
         ಆಸುರದ ವ್ಯಾಮೋಹವಿದು ಡೊ
         ಳ್ವಾಸವೋ ಕೌರವರ  ಥಟ್ಟಿನ
         ವೈಸಿಕವೋ  ನಿಮ್ಮಡಿಯ  ಮಾಯಾಮಯದ ಮಾಲೆಗಳೋ
         ವಾಸಿ ಬೀತುದು ಛಲಗಿಲದ  ಕಾ
         ಳಾಸ  ಸೋತದು  ಕರ್ಣನಲಿ ಹಿರಿ
         ದಾಸೆಯಾಯಿತು ಕೃಷ್ಣ  ಕರುಣಿಸು  ಕರ್ಣನಾರೆಂದ ....?

        ಕಾಲಯವನನುಪಾಯದಿಂದವೆ
        ಬೀಳಿಸಿದೆ ಮಾಗಧನನಾ  ಪರಿ
       ಸೀಳಿಸಿದೆ  ಬೀಷ್ಮಾದಿಗಳ ಸೋಲಿಸಿದೆ ಸಾಮದಲಿ
       ಡಾಳನತಿ ಡೊಂಕಣಿಯ ಠಕ್ಕಿನ
       ಠೊಳಿಕಾರನು ನಿನ್ನ ಮಾಯೆಯ
       ಹೇಳಲೆಮ್ಮೆನು ಕೃಷ್ಣ  ಕರುಣಿಸು  ಕರ್ಣನಾರೆಂದ ....?
******************************************
ಕಾಲ ಯಮನನ್ನು ಸೋಲಿಸಿದೆ, ಮಾಗಧನನ್ನು ಸೀಳಿಸಿದೆ, ಭೀಷ್ಮಾದಿಗಳನ್ನ ಸೋಲಿಸಿದೆ ,ಡೊಂಕಿಣಿ  ಠಕ್ಕಿಣಿಯರನ್ನ,, ವಿಶ್ವದ ವೀರಾದಿ ವೀರರನ್ನು  ಸದೆಬಡಿದೆ. ಇದಕ್ಕೆ ಕಾರಣ  ದೇವಾದಿ ದೇವಾ  ನೀನಲ್ಲವೇ?
ಕರುಣಿಸು ದೇವಾ  ಈ  ಕರ್ಣ ಯಾರು? ಈತನಲ್ಲಿ  ನನಗೆ ವೈರತ್ವವಿಲ್ಲ ಈಗ. ಈತ ನನ್ನ  ದಾಯಾದಿ ಯಂತೆ ಭಾಸವಾಗುತದಲ್ವೇ?ಕಾರಣ ಏನು ಕೃಷ್ಣ ?
******************************************

      ಋಷಿಗಳನುಮತದಿಂದ  ಕುಂತಿಯ
      ಬಸುರಲೇನುದಯಿಸನಲೆ ನೀ
      ನಸುರರಿಪು ಬಹುಕಪಟನಾಟಕ  ಸೂತ್ರಧಾರನಲೆ
      ವಸುಮತಿಯ ಭಾರವನು ಸಲೆ  ಹಿಂ
      ಗಿಸುವ  ಕೃತ್ಯವು  ನಿನ್ನದೆನಗು
     ಬ್ಬಸವಿದೆನಂದರಿಯೆನಕಟಾ  ಕರ್ಣನಾರೆಂದ .....?
******************************************
ಮಹರ್ಷಿಗಳ  ವರದಿಂದ  ಕುಂತಿಯ  ಗರ್ಭದಲ್ಲಿ ಹುಟ್ಟಿದವನು ಈತನಲ್ಲವೇ? ಸೂತ ಪುತ್ರ ಎಂದು ಯಾವ ಅಂಶವೂ ಕಾಣುವುದಿಲ್ಲ. ಈತನ ಪರಾಕ್ರಮ ಬಹಳ ಮೇರು,ಇವನ ಚರ್ಯೆ ಗಳನ್ನ ಗಮನಿಸಿದರೆ ಒಂದರ್ಧದಲ್ಲಿ ಯುಧಿಷ್ಠಿರ, ಇನ್ನೊಂದರ್ಧಲ್ಲಿ  ಪರಾಕ್ರಮಿ ಅಭಿಮನ್ಯು  ವನ್ನ  ಕಂಡಂತೆ ಭಾಸವಾಗುತ್ತದೆ . ದೇವಾದಿ ದೇವಾ ಕೃಷ್ಣ  ನೀನು ಕಪಟ ನಾಟಕ ಸೂತ್ರಧಾರಿ ,ಭೂಮಿಯ ಭಾರವನ್ನು  ತಗ್ಗಿಸೀಲೆಂದೇ ಧರೆಗಿಳಿದವನು ,ನನಲ್ಲಿ  ನಿಜಾಂಶವನ್ನ ಮುಚ್ಚಿಡದೆ  ಕರ್ಣ  ಯಾರೆಂದು  ಹೇಳು  ಕೃಷ್ಣ  ದಯ ತೋರು...!!!
******************************************
     ಧರೆಯ  ಬಿಡುವೆನು ಕುರುಪತಿಗೆ  ನಾ
     ವರುವರೊಡಹುಟ್ಟಿದವರು ವಿಪಿನಾಂತರದೊಳಗೆ
     ಭಜಿಸುವೆವು  ನಿನ್ನನು  ಭಾವಶುದ್ದಿಯಲಿ
     ತೆರಳುವೀಸಿರಿಗೋಸುಗರ  ಸೋ
     ದರನ  ಕೊಲುವೆನೆ ಕೃಷ್ಣ  ಕರಣಿಸು
    ಕರುಣಿಸಕಟಾ ಕೃಷ್ಣ  ಕರಣಿಸು  ಕರ್ಣನಾರೆಂದ .....?

     ದೂರುವವರಾವಲ್ಲ  ಕರುಣವ
    ತೋರಿ ಬಿನ್ನಹ ಮಾಡಿದೆನು  ಹಗೆ
    ಯೇರದಿವನಲಿ  ಸೇರುವುದು  ಸೋದರದ  ಸಂಬಂಧ
    ಆರೆನೀತನ  ಕೊಲೆಗೆ  ಹೃದಯವ
   ಸೂರೆಗೊಂಡನು  ಕರ್ಣನಕಟಾ
  ತೋರಿ ನುಡಿಯಾ  ಕೃಷ್ಣ    ಕರಣಿಸು  ಕರ್ಣನಾರೆಂದ .....?
******************************************************

ಇಡೀ  ಧರೆಯನ್ನ  ಕೌರವನಿಗೆ  ಕೊಡುತ್ತೇ ನೆ . ಪಾಂಡವರು  ಐವರಲ್ಲ ,ಆರುಮಂದಿ  ಎಂದು  ಘೋಷಿಸಿ ,ಆರೂವರು  ಒಡಗೂಡಿ ನಿನ್ನನ್ನ ಭಾವ ಶುದ್ಧಿಯಲ್ಲಿ ಭಜಿಸುತ್ತೇವೆ ,ಕ್ಷಣಿಕವಾದ ಈ ಸಂಪತ್ತಿಗೆ ,ನನ್ನ  ಅಣ್ಣ ನನ್ನ ಕೊಲ್ಲಬೇಕೆ ?ಈವರೆಗೆ ನಡೆದ  ಘಟನೆಯನ್ನೆಲ್ಲ ಬದಿಗೊತ್ತಿ ,ಒಣ  ಪ್ರತಿಜ್ಞೆಯನ್ನೆಲ್ಲ ಮರೆತು ಇವನನ್ನ ಕೊಲ್ಲಲಾರೆ ಕೃಷ್ಣ . ಸಲಹು  ಈ ಕರ್ಣ ಯಾರು ? ಅವನಿಗೂ ಪಾಂಡವರಿಗೂ  ಏನು ಸಂಬಂಧ?
******************************************************



     

     

Friday 31 May 2013

KP Nettar's ದಾ...ರಿ



                                                KP Nettar's
                                              ದಾ...ರಿ 

#75,  5 ನೇ  ಘಟ್ಟ   'ಅಂತಿಮ ' ಕ್ಕೆ  ದಾರಿ  ಎಲ್ಲೆಂದು  ಒಬ್ಬ  ದಾರಿ ಹೋಕನು   ಅಂಗಡಿಯವನಲ್ಲಿ ಕೇಳಿದನು.
"ಮುಂದಿನ  ಮೂರನೇ  ರಸ್ತೆಯ  ಎಡಬಾಗದಲ್ಲಿ  ಗಣಪತಿ ದೇವಸ್ಥಾನ  ಸಿಗುತ್ತದೆ  ಅಲ್ಲಿಂದ ಬಲಬದಿಗೆ ತಿರುಗಿದಾಗ  ಒಂದು  ಮಠ  ಕಾಣಬಹುದು .. ಅಲ್ಲೇ ಹತ್ತಿರ  "  ಎಂದನು  ಅಂಗಡಿಯವನು....

#75,  5 ನೇ ಘಟ್ಟ   'ಅಂತಿಮ ' ಕ್ಕೆ ದಾರಿ ಎಲ್ಲೆಂದು  ಇನ್ನೊಬ್ಬ ದಾರಿ ಹೋಕನು ಅಂಗಡಿಯವನಲ್ಲಿ ಕೇಳಿದನು.
" ಇದೇ   ದಾರಿಯಲ್ಲೇ  ಹೋದಾಗ   ಗ್ರಂಥಾಲಯ  ಕಾಣಬಹುದು...ಅಲ್ಲಿಂದ   ಇನ್ನು ಸ್ವಲ್ಪ  ಮುಂದೆ ಹೋದಾಗ   ಮುದ್ರಣಾಲಯ  ಸಿಗುತ್ತದೆ  ಅಲ್ಲೇ  ನೀವು ಕೇಳಿದ  ವಿಳಾಸ  ಸಿಗಬಹುದು"  ಎಂದನು..

#75, 5 ನೇ ಘಟ್ಟ 'ಅಂತಿಮ ' ಕ್ಕೆ  ದಾರಿ ಎಲ್ಲೆಂದು ಇನ್ನೊಬ್ಬ  ಕೇಳಿದನು.
"ಮುಂದೆ  ಹೋದಾಗ  ಕಲಾ ಮಂಟಪ   ಸಿಗುತ್ತದೆ ಅಲ್ಲಿಂದ ಬಲು ಹತ್ತಿರ  ಎಂದನು .."



#75, 5 ನೇ ಘಟ್ಟ 'ಅಂತಿಮ ' ಕ್ಕೆ  ದಾರಿ ಎಲ್ಲೆಂದು  ಮೊದಲೊಬ್ಬ  ಕೇಳಿದನು.
ಒಂದು  ತಿರುವಿನಲ್ಲಿ  ಪೋಲಿಸ್  ಸ್ಟೇಷನ್   ಇದೆ   ಅಲ್ಲಿಂದ   right   turn   ತಗೊಂಡರೆ  ಮುಂದಿನ ಹಾದಿಯಲ್ಲಿ  ಆ ವಿಳಾಸ  ಬರುತ್ತ್ತದೆ!  ಅಂದ.

#7 5 ....... ಕ್ಕೆ  ದಾರಿ ಎಲ್ಲಿಯೆಂದು  ಮತ್ತೊಬ್ಬ  ಕೇಳಿದನು
"ಮುಂದೆ ಒಂದು ವಿದ್ಯಾಲಯ ಇದೆ  ಅದರ ಪಕ್ಕದಲ್ಲಿ ಇನ್ನೊಂದು ವಿಶ್ವವಿದ್ಯಾಲಯವಿದೆ  ಮುಂದಿನದು ನಿಮ್ಮದೇ ದಾರಿಯಾಗಿರುತ್ತದೆ ಎಂದನು ......


ಅಂಗಡಿಯ  ಪಕ್ಕದಲ್ಲಿದ್ದ ಹುಡುಗ: " ಎಲ್ಲರೂ  ಒಂದೇ  ದಿಶೆಯನ್ನು   ಕೇಳಿದಾಗ   ನೀವು   ಯಾಕೆ  ಪ್ರತಿಯೊಬ್ಬರಿಗೂ  ವಿಭಿನ್ನ  ಸುಳ್ಳು   ಮಾರ್ಗವನನ್ನ  ತೋರಿದಿರಿ? "  ಅಂದನು 

ಅಲ್ಲೇ ಪಕ್ಕದಲ್ಲಿದ್ದ  ಸಂತ  :  ಮಗು  ಅಂಗಡಿಯವನು  ಅನುಭವಿ  ಮತ್ತು   ತುಂಬಾ  ಜನರನ್ನ ನೋಡಿದಾತ... ಎಲ್ಲೂ   ತಪ್ಪು  ಹೇಳಿಲ್ಲ   ಎಲ್ಲರಿಗೂ   ದಿಶೆ ಒಂದು ಆದರೆ   ಮಾರ್ಗ   ಹಲವು .  ಯಾರುಯಾರಿಗೆ   ಯಾವ   ಮಾರ್ಗ ಬೇಕೊ   ಆ  ಮಾರ್ಗವನ್ನ   ಸೂಚಿಸಿದ್ದಾನೆ  . ಬಹುಪಾಲು  ನಮ್ಮ  ಜೀವನ   'ದಾರಿ'ಯನ್ನೇ   ಅವಲಂಬಿತವಾಗಿದೆ! ಹೆದ್ದಾರಿ   ಕೆಲವರದ್ದಾದರೆ  ಕಳ್ಳದಾರಿ  ಇನ್ನು  ಕೆಲವರದು  .ದಾರಿಯಲ್ಲಿ ಮುಳ್ಲಿರುವುದು ಒಂದು  ಜೀವನವಾದರೆ  ,ಮುಳ್ಳಲ್ಲೇ ದಾರಿ    ಮಾಡಿಕೊಂಡು  ಬದುಕುವ  ಜೇವನವಿದೆ.  ನಡೆದದ್ದೇ   ದಾರಿ   ನಾಯಕನದ್ದು , ಅನುಸರಿಸಿದ  ದಾರಿ ಹಿಂಬಾಲಕರದ್ದು . 

ಜೀವನದಲ್ಲಿ   ತಪ್ಪು ದಾರಿ , ಕಳ್ಳದಾರಿ   (wrong  turn )ಹಿಡಿದವನಿಗೆ   right  turn  (ಸರಿ ದಾರಿ) ಹೇಳಿದ್ದಾನೆ  ,ಕಲಾ  ರಸಿಕನಿಗೆ   ಕಲಾ  ಕ್ಷೆತ್ರ   ತೋರಿದ್ದಾನೆ . ವಿದ್ಯಾರ್ಥಿಗೆ   ವಿದ್ಯಾಲಯ  ತೋರಿದ್ದಾನೆ ,ಭಕ್ತನಿಗೆ   ಮಂದಿರ  ....... ,, ಹೀಗೆ..... 

ಹುಡುಗ:  ಹಾಗಾದರೆ   #7 5  ವಯಸ್ಸಾ.....?  5   ಘಟ್ಟ ಗಳು     ಅಂದರೆ   ಬಾಲ್ಯ  ,ಯವ್ವನ  ,ಗೃಹಸ್ಥಾಶ್ರಮ  ......?, ಅಂತಿಮ   ಅಂದರೆ     final  destination ..?




Saturday 10 March 2012

ಕೆಪ್ಲಾಂಡಿಗರ ಸುತ್ತ...

                                                              ಕೆಪ್ಲಾಂಡಿಗರ ಸುತ್ತ...

ಆಲದ  ಮರ ನೆ  ಹಾಗೆ   ಅದರ  ಹತ್ತಿರ  ಮುಳ್ಳಾಗಲಿ, ಪೊದೆ ಗಂಟಿಗಳು ಇನ್ನಾವುದು ತೊಂದರೆ ಕೊಡುವ  ಹುಲ್ಲುಗಳಾಗಲಿ  ಹತ್ತಿರ ಇಟ್ಟುಕೊಂಡಿರುವುದಿಲ್ಲ.ಅಥವಾ  ತನ್ನ  ದೈತ್ಯ ಗಾತ್ರದಿಂದ  ಸೂರ್ಯ ರಶ್ಮಿಗಳನ್ನ ತಾನೇ ಹೀರುವುದರಿಂದ ಇನ್ನೊಂದು ಜೀವಕ್ಕೆ  ಅನ್ಯಾಯವಾಯಿತೇನೋ ..?   ನಾವಂತೂ  ಆಲದ ಮರದಷ್ಟು ದೊಡ್ಡವರಲ್ಲ,  ಇತ್ತ   ಪಾಚಿ ಹುಲ್ಲಿನಷ್ಟು  ಸಣ್ಣವರಾಗಿದ್ದರೆ   ಮುಳ್ಳಿನ ಭಯವೂ ಇರುತ್ತಿರಲಿಲ್ಲ.! ಎಲ್ಲಾ ಮುಳ್ಳನ್ನೂ  ತಪ್ಪಿಸಿ   ಬದುಕಲು  ಪಾಚಿ ಹುಲ್ಲಲ್ಲ, ಅಲ್ಲಾಡದೆ ನಿಂತಿರಲು  ಆಲದ ಮರದ ಜನ್ಮವೂ ಅಲ್ಲ. ಬೇಕಾದ ಹಾಗೆ ಧಡೂತಿ ಆಕೃತಿ ಬೆಳೆಸಿದ , ಮೈಯೆಲ್ಲಾ ಬಳ್ಳಿ ಆವರಿಸಿದ , ಅಲ್ಲಲ್ಲಿ ಗಂಟುಗಳನ್ನು ಆವರಿಸಿಕೊಂಡ , ಇನ್ನೊಂದೂ ಹುಲ್ಲು ಹುಟ್ಟದ ಹಾಗೆ ಕತ್ತಲನ್ನು ಆವರಿಸುವ ಆ ಆಲದ ಮರವನ್ನ ಎಲ್ಲರೂ ಇಷ್ಟಪಡುತ್ತಾರೆ ಅನ್ನೋದು ಅನುಮಾನ.ಇನ್ನು ಪಾಚಿಯೋ ಅದನ್ನ ಎಲ್ಲರೂ ಗಮನಿಸುವುದೂ ಕಷ್ಟದ ಸಂಗತಿ. 

ಅದೆಲ್ಲೋ  ಹೇಳುವಂತಹದಲ್ಲದ  ಸಣ್ಣ ತಪ್ಪು ನಮ್ಮಿಂದ ಆಗಿರುತ್ತದೆ  ನಮ್ಮ ಪೂರ್ವಜರ,ಇಲ್ಲವೇ ಹೆತ್ತವರ,   ಇತಿಹಾಸವನ್ನೋ, ಪರಿಸ್ಥಿತಿಯನ್ನೋ, ದೌರ್ಭಲ್ಯವನ್ನೋ,,ಚಟವನ್ನೋ  ದೊಡ್ಡ ನೆಪವಾಗಿಸಿಕೊಂಡು  ಹತ್ತಾರು ಮಂದಿಯ ಸಮ್ಮುಖದಲ್ಲೇ   ಅವಮಾನಿಸಿರುತ್ತಾರೆ. ನಿಜ್ಜ ಹೇಳಬೇಕಾದರೆ ನಾವು ಮಾಡಿದ ತಪ್ಪು ನಮ್ಮ ಅಪ್ಪ-ಅಮ್ಮ ,ಪೂರ್ವಜರು ಮಾಡಿದ ಇತಿಹಾಸಕ್ಕೆ ಅಥವಾ ದೌರ್ಭಲ್ಯಕ್ಕೆ ಹೋಲಿಕೆ ಇರುವುದಿಲ್ಲ.ಅದು ನಾವು ಮಾಡಿದ ತಪ್ಪಿಗೆ ಅಪ್ರಸ್ತುತ. ನಿಮ್ಮ ಅಪ್ಪ ಅಮ್ಮ ಹೀಗೆ ಇದ್ದರು ...ಅಂತ ಹೇಳುವವರು ನಮ್ಮ ತಪ್ಪು ಸರಿಯಾಗಲಿ ಎಂಬ ನಿಜ ಉದ್ದೇಶಕ್ಕಾಗಿರುವುದಿಲ್ಲ...ತಾನು ಸಭ್ಯಾರಾಗಿದ್ದೆವೆಂಬ ಎಂಬ ಸ್ವ ಪ್ರಶಂಸೆ ಪಡೆಯಲು! ಕೆಪ್ಲಾಂಡಿಗರಿಗೆ ಇಂತಹ ತೆವಲು. ನಿಜವಾಗಿ ನಮ್ಮ ತಪ್ಪನ್ನು ಅವರು ತಿದ್ದಬೇಕಾದರೆ ನಮ್ಮನ್ನು ಖಾಸಗಿಯಾಗಿ ಕರೆದು ಹೇಳಬೇಕಾದ ಹುಳುಕನ್ನು ಹೇಳಬಹುದಾದ ಕ್ರಮದಲ್ಲಿ ಹೇಳಬಹುದು . ಕೆಪ್ಲಾಂಡಿಗರಿಗೆ ಅದು ಬೇಕಾಗಿಲ್ಲ. ನಮ್ಮ ಅವಮಾನ ಮತ್ತು ಅವರ   ಸ್ವ ಪ್ರಶಂಸೆ ಅವರಿಗೆ ಬೇಕು. ತಕ್ಷಣ ಪ್ರತಿಕ್ರಿಯಿಸಬೇಕು (React) ಅಂತನಿಸದೆ ಇರದು ನಮಗೆ. ಒಂದುವೇಳೆ ನಾವು ಪ್ರತಿಕ್ರಿಯಿಸಿದ್ದೇ ಆದರೆ ಅದು ಕೆಪ್ಲಾಂಡಿಗರಿಗೆ ಸಂದ ಜಯ.
ಜವಾಬ್ಧಾರಿಯುತ ಮನೆಯ ಸೊಸೆ ನೀವಾಗಿದ್ದರೆ ತವರು ಮನೆಯ ಕುಟುಂಬದ ಯಾರೋ ಒಬ್ಬರು ಮಾಡಿದ ಎಡವಟ್ಟು ನೀವೇ ಮಾಡಿದ್ದೀರಿ ಎಂದು ಬಿಂಬಿಸಲು ಶುರು ಮಾಡುತ್ತಾರೆ. ಇಲ್ಲಿ ನಮ್ಮಲ್ಲಿರುವ ಸಂಯಮ ನಮ್ಮನ್ನು ಕಾಪಾಡುತ್ತದೆಯೇ ವಿನಃ ಪ್ರತಿಕ್ರಿಯಿಸುವುದರಿಂದಲ್ಲ.
ನಮ್ಮ ಜೀವನದಲ್ಲಿ ಇಂತಹ ಚಿಕ್ಕ ಚಿಕ್ಕ ವಿಷಯಗಳು ಮುಳ್ಳುಗಳು ಚುಚ್ಚುತಿರುತ್ತದೆ, ಆಗಾಗ್ಗೆ ನೋವನ್ನ ಕಾಡುತಿರುತ್ತದೆ. ಕಾಲ ಕ್ರಮೇಣ ರೋಧಕ ಶಕ್ತಿ ಹೆಚ್ಚುತಿರುತ್ತದೆ.ಎಲ್ಲ ವಿಚಾರವನ್ನು ನಾವು ಹೇಗೆ ಸ್ವೀಕರಿಸುತ್ತೀವಿ ಅನ್ನೋದರಲ್ಲೇ ನಮ್ಮ ಜೀವನದ ಪಾತ್ರವನ್ನು ವಹಿಸುತ್ತದೆ. ಅಯೋಡಿನ್ ಭರಿತ ಉಪ್ಪು ನಮ್ಮ ದೇಹದ ರಾಸಾಯಿನಿಕ ವನ್ನ ಹೇಗೆ ಸಮತೋಲನವನ್ನ ಕಾಪಾಡುತ್ತೋ ಒಂದರ್ಥದಲ್ಲಿ ಕೆಪ್ಲಾಂಡಿಗರು ಸಹ ನಮ್ಮ ಜೀವನವನ್ನ ಸಮತೋಲನವನ್ನ ಕಾಪಾಡಿರುತ್ತಾರೆ. ನಮ್ಮ ಜೀವನದ ಶೈಲಿಯ ಅಸಮತೋಲನವನ್ನ ತಪ್ಪಿಸಿರುತ್ತಾರೆ.
ಕೆಪ್ಲಾಂಡಿಗರು ಕಡಿಮೆ ಇರುವ ನಮ್ಮ ಓರಗೆಯವರನ್ನ ಗಮನಿಸಿ: ಪೋಲಿಸ್ ನ ಮಗ ಪೋಲಿಯಾಗಿರುವುದು, ಮಾಸ್ತರರ ಮಗ ಫೈಲಾಗಿರುವುದು, ಶ್ರೀಮಂತರ ಮಗ ಸಾಲಗಾರನಾಗಿರುವುದು, ದೊಡ್ಡವರ ಮಕ್ಳು ಸಣ್ಣತನ ಮಾಡಿರುವುದು.ಸಭ್ಯರ ಮಕ್ಕಳು ಪೋರ್ಕಿಯೊಂದಿಗೆ....ಹೀಗೆ ಹಲವಾರು ಉದಾಹರಣೆ ಯನ್ನ ಕಾಣುತ್ತೇವೆ. ಅದೇ ಕೆಪ್ಲಾಂಡಿಗರ ಜೊತೆ ಬೆಳೆದವರನ್ನ ಗಮನಿಸಿದಾಗ ಕುಡುಕನ ಮಗ ಕುಡಿತದಿಂದ ದೂರ, ಜೂಜುಗಾರನ ಮಗನಿಗೆ ಬಾಜಿ ಕಟ್ಟುವುದೇ ಗೊತ್ತಿರುವುದಿಲ್ಲ, ಸಣ್ಣ ವರ ಮಕ್ಕಳು ಸಣ್ಣ ತನ ,ಚಿಲ್ಲರೆ ಕೆಲಸದಿಂದ ದೂರವಿರುತ್ತಾರೆ, ಲಂಪಟ ತನ ವಿರುವವನ ಮಗ ಲಂಪಟ ತನದಿಂದ ದೂರವಿರುತ್ತಾನೆ, ಸಾಲಗಾರನ ಮಕ್ಕಳು ಸಾಲದಿಂದ ದೂರವಿರುತ್ತಾರೆ.
ಪುಣ್ಯವಶಾತ್ ನಾವು ನೀವೆಲ್ಲಾ ಕೆಪ್ಲಾಂಡಿಗರ ಸುತ್ತ ಬದುಕುತಿದ್ದೀವಿ ...ಏನಂತೀರಿ...?
   

Sunday 19 February 2012

ಚೆಲ್ವಿಗೊಂದು ಮಾತು ...

                                            ಚೆಲ್ವಿಗೊಂದು    ಮಾತು ...

 ಅವನು ನೋಡಿಯೂ  ವಿನಯದಿಂದ ನಗಲಿಲ್ವಾ..?  ನಿನ್ನನ್ನ   ನೋಡಿಯೂ  ಮಾತನಾಡಿಸಲಿಲ್ವ..?  ಹುಟ್ಟು ಹಬ್ಬದ ಶುಭಾಷಯ ಕಳಿಸಿಲ್ವಾ..?  ನೀ ಮೆಚ್ಚಿದ   ಹುಡುಗ ಇನ್ನೊಬ್ಬಳೊಂದಿಗೆ  ಫ್ಳರ್ಟು ಮಾಡ್ತಾ ಇರ್ತಾನ.?  ನೀ ಕರೆದಾಗ  ಭೇಟಿಯಾಗಲು ಪಾರ್ಕಿಗೆ ಬರಲಿಲ್ವ..?  ಸಿನೆಮಾಕ್ಕಂತೂ ಕರಕ್ಕೊಂಡು  ಹೋಗಿಲ್ವಾ..?   miss call  ಕೊಟ್ಟಾಗ  ಅವನು ತಿರುಗ  call ಮಾಡಲ್ವಾ..? ಹೋಗಲಿ   call ಮಾಡಿದಾಗ   ಪ್ರತೀ call ನ್ನೂ attend    ಮಾಡಿಲ್ವಾ.?  Mail   ಗೆ  respond   ಮಾಡಲ್ವ..?    ನೀ  ಚೆಂದವಾಗಿ   ಕಾಣುವಂತೆ  ಅಲಂಕರಿಸಿ ಉಡುಗೆ ತೊಟ್ಟಾಗ  ಒಳ್ಳೆಯ ಮಾತನ್ನೂ  ಹೇಳದೇ ಹೊರಟು  ಹೋದನಾ .?  ಒಂದುಸಲನೂ   ಚಾಕಲೇಟ್  ಐಸುಕ್ರೀಮು ಕೊಟ್ಟಿಲ್ವಾ...?   ಈವರೆಗೆ  ಜೀನ್ಸು ಪೇಂಟು ಗಿಫ್ಟಾಗಿ ಕೊಂಡುಕೊಳಲಿಲ್ವಾ..?   

ಗೆಳತಿ...,
ಅಷ್ಟೊಂದು ಜನ  ಸ್ಪರ್ಧೆಗಿರುವಾಗ   .."ನಿನಗೆ ಸಿಗಲ್ಲ ಬಿಡು"  ಅನ್ನೋ ಹುಡುಗನಿಗಿಂತ  "ಅಷ್ಟೂ ಜನರಲ್ಲಿ  ನೀ ಒಬ್ಬಳು ಯಾಕಾಗಬಾರದು  ಪ್ರಯತ್ನಿಸಿ ನೋಡು"   ಅನ್ನುವವನ ಮಾತು ಹತ್ತಿರವಾಗಬೇಕು.

ಹಿರಿಯರ ಮುಂದೆ ಕಾಲಮೇಲೆ ಕಾಲು ಬೇಡ !..ಕಾಲು ಅಲ್ಲಾಡಿಸಬೇಡ!   ಅನ್ನೋದು ಅವನಿಂದ  ಕಿರಿ ಕಿರಿ ಮಾತು  ಆದರೂ ...ಅದು ನಮ್ಮನ್ನ  ಡಿಸೆನ್ಸಿಯನ್ನಾಗಿಸುತ್ತದೆ. ಅವನ ಮಾತು ತುಂಬಾ ಸಲ  ಪ್ರಯೋಜನಕಾರಿಯನ್ನಾಗಿಸುತ್ತದೆ.     



 ತುಂಬಾ ಸಲುಗೆಯಿಂದಿರಬೇಡ ..ಎನ್ನುವ    ಮಾತು ಹರಟೆಯಾದರೂ  ನಮ್ಮನ್ನ  ದಾರಿ ತಪ್ಪದಂತೆ ಮಾಡಿದಕ್ಕೆ  ಗೌರವ ಕೊಡಲೇಬೇಕು.

ಆ ..ದಿನಗಳಲ್ಲಿ   ಕೇವಲ   ಸಾಂತ್ವಾನ  ಮಾತ್ರ   ನೆಮ್ಮದಿ ತರಬಲ್ಲದು, ಕೇಳೆ... ಗೆಳತಿ ಆ  ಒಂದು ನೆಮ್ಮದಿಯ ಸಾಂತ್ವಾನ   ಸಾವಿರ  ಐಸುಕ್ರೀಮು  ಕೊಟ್ಟರೂ ಸಿಗದು.

ಚೆಲ್ಲು ಚೆಲ್ಲು ವಾಗಿ ಮಾತನಾಡಿ ಸುಮ್ಮ್  ಸುಮ್ನೆ ಖಾಸಗಿ  ವಿಷಯವನ್ನ ಬಯಲು ಮಾಡೋದಕ್ಕಿಂತ,  ಅಥವಾ  ನಿಜ ವಿಷಯವನ್ನ ತಿರುಚಿ  ತರ್ಲೆ ,ರಗಳೆಗಳನ್ನ  ನಮ್ಮ ಮೇಲೆ ಬರುವ ಹಾಗೆ ಮಾಡೋದಕ್ಕಿಂತ  ತಟಸ್ಥವೆ  ಲೇಸು....

ಅಂದಕ್ಕೆ ಅಭಿಮಾನಿಯಾಗು  ಒಳ್ಳೆದೇ  ಹಾನಿಯೇನಿಲ್ಲ....ಆದರೆ ಅವನ  ಅಂಧ:ಕ್ಕೆ  ಅಲ್ಲ.

ನನಗೊತ್ತು ನೀನು ಸ್ಟೈಲು ಗಾರ್ತಿ! ಚೂಡಿ  ಉಟ್ಟಾಗ  ಒಂದು ಸ್ಟೈಲು,  ಸೀರೆ ಉಟ್ಟಾಗ ಇನ್ನೊಂದು ತರಹದ ಸ್ಟೈಲು,.. ಜೀನ್ಸು ಹಾಕಿದಾಗ  ಕಣ್ಣು ಕ್ಲಿಕ್ಕಿಸುವ ಸ್ಟೈಲು! ಲಿಫ್ಟಿಕ್  ಹಾಕಿದಾಗ ಕಣ್ಣು ಕುಕ್ಕಿಸುವ  ಶೋಕಿ ...ಇದು ನಿನ್ನ  ಸ್ವಂತ ಆಸ್ತಿ.

ಬಹುತೇಕವಾಗಿ  ನಾವು  ಅದೇನೋ  ನಮ್ಮ ಮೆಚ್ಚಿನ, ನಮಿಗೆ ಹತ್ತಿರವಾದವರು  ನಮ್ಮ ದಿನ ನಿತ್ಯದ ಚಲನ ವಲನಕ್ಕೆ  ಬೇಲಿ ಹಾಕ್ತಿದ್ದಾರೆ  ಆನಿಸಿಬಿಡುತ್ತದೆ. ಆದರೆ  ಹೆಚ್ಚಿನ ಸಲ ನಮಗೆ ಗೊತ್ತಿಲ್ಲದಂತೆ ಸುಳ್ಳಾಗುತ್ತದೆ ಅವೆಲ್ಲಾ  ಬೇಲಿ ಅಲ್ಲ .. ಅವು   ಒಂದು  guide map ಆಗಿರುತ್ತದೆ ಅಷ್ಟೇ!  ಅದನ್ನು  ಉಪಯೋಗಿಸಿದ್ದೆ   ಆದಲ್ಲಿ  ನಾವು ಹೋಗಬೇಕಾದ ದಾರಿ ತಪ್ಪುವುದಿಲ್ಲ,ಮೋಸಹೋಗುವುದು  ಕಡಿಮೆಯಾಗುತ್ತದೆ! 

ಇನ್ನೂ  ಸಾಕಷ್ಟು  ಮಾತಾಡಬೇಕಿತ್ತು....  Coffee-DAY ಗೆ ಬರ್ತಿಯಾ...?

  



    

Friday 6 January 2012

ಅದೊಂದು ದೌರ್ಬಲ್ಯನಾ ..?


                                             ಅದೊಂದು  ದೌರ್ಬಲ್ಯನಾ ..? 

 ನಯವಾದ ಕೆನ್ನೆಗೆ ಒಂದೇ ಒಂದು  ಮೊಡವೆ ಇದ್ದರೆ ಸಾಕು  ಮುಂದೆರಡು  ದಿವಸ  ಕನ್ನಡಿ ನೋಡಿಕೊಂಡೆ  ಅದು ತಿಂದು ಬಿಡುತ್ತೆ.ನಮ್ಮಲ್ಲಿ ಏನೋ ಒಂದು ಅಪರಾಧವಾದಂತೆ  ಅದನ್ನು ಹೋಗಲಾಡಿಸುವುದು   ಹೇಗೆಂದು ಅದೇ ಯೋಚನೆ. ಸ್ವಲ್ಪ ಹಲ್ಲು ಎತ್ತರ ಇದ್ದರೆ ಸಾಕು  ತುಟಿಯನ್ನು  ಬಲವಂತವಾಗಿ  ಮುಚ್ಚಲು ಪ್ರಯತ್ನ ಪಡುತ್ತೀವಿ. ಫೋಟೋ  ಕ್ಲಿಕ್ಕಿಸಿವಾಗ ಇನ್ನೊಬ್ಬರು ನೋಡುವಾಗ  ತುಟಿ ಮುಚ್ಚಿದ್ದೀನಾ ..? ಎಂದು ಅದೇ ಯೋಚನೆ. ಸ್ವಲ್ಪ ದಪ್ಪವಿದ್ದರೆ ಸಾಕು ತೆಳುವಾಗೋಕೆ  ಔಷಧದ ಪಟ್ಟಿಯ  ಬಗ್ಗೆ  Ph D  ನೆ ಆಗಿರುತ್ತದೆ. ಸ್ವಲ್ಪ ತೆಳ್ಳಗಿದ್ದರೆ ...ದಪ್ಪವಾಗಲು  ಅವನಲ್ಲಿ ಪೌಷ್ಟಿಕಾಂಶದ   ಡಬ್ಬಗಳ  ಸಂಗ್ರಹಣೆಯಿರುತ್ತದೆ. ತಲೆ ಮೇಲೆ ಸಂಪೂರ್ಣ ಕಪ್ಪಗಿನ  ಕೂದಲುಗಳಿದ್ದರೂ ಒಂದೆರಡು ಬಿಳಿ ಕೂದಲುಗಳು ಕಂಡರೆ ಸಾಕು ಮನಸ್ಸೆಲ್ಲ ಆ ಎರಡು ಕೂದಲುಗಳ ಮೇಲೆ ಹೋಗುತ್ತದೆ. ತಲೆಗೆ ಹಾಕುವ  ತೈಲದ  ಅನ್ವೇಷಣೆ ಶುರುವಾಗುತ್ತೆ. 'ಎಣ್ಣೆ ಬಿಳಿ' ಎನ್ನುವ ಕಾರಣಕ್ಕೆ ಮುಖವನ್ನ ಹಾಲು ಬಿಳಿ ಮಾಡಲು ವಿಪರೀತ  ಕ್ರೀಮನ್ನ  ಹಚ್ಚಿರುತ್ತೇವೆ.ಇವೆಲ್ಲ ನೋಡಿದರೆ  ನಾವು ಮಾಡಿದ  ತಪ್ಪು  ಆಗಿರುವದಿಲ್ಲ,ಆದರೆ ನಮ್ಮಿಂದ ಏನೋ ಪ್ರಮಾದ ಆಯ್ತಾ   ಅಥವಾ  ಹೀಗಿಲ್ಲದಿದ್ದರೆ  ಎಲ್ಲ ಸರಿ ಇರುತಿತ್ತು ಎಂದು ಅಗತ್ಯಕ್ಕಿಂತ ಜಾಸ್ತಿ ಚಿಂತಿಸುತ್ತೇವೆ.
ವಾಸ್ತವವಾಗಿ  ಜೀವನ ಪೂರ್ತಿ ಇಂತಹ -ಇಂತಹ  ದೌರ್ಬಲ್ಯದಿಂದಲೇ  ಬದುಕು  ಎಂದು ಪೂರ್ವ ನಿರ್ಧರಿತ ವಾದಂತಹುದಲ್ಲ. ದೌರ್ಬಲ್ಯಗಳೆಲ್ಲ  ನಮಗೆ ನಾವೇ ತೋಡಿ ಕೊಂಡಂತಹ ಗುಂಡಿಗಳೇ ಹೊರತು ನಾವು ಗುಂಡಿಗೆ  ಬೀಳಲಿ ಎಂದು ಇನ್ನೊಬ್ಬರು  ತೆಗೆದಿಟ್ಟದ್ದಲ್ಲ . ಮೇಲೆ ತಿಳಿಸಿದ ಯಾವುದೂ  ನಾವು ಮಾಡಿದಂತಹ  ಅಪರಾಧವಲ್ಲ. ಅವೆಲ್ಲವೂ ಸ್ವಾಭಾವಿಕ ಇಲ್ಲವೇ ಸ್ವಲ ಏರು-ಪೇರು...ಆದರೆ  ನಾವೇನೋ ಅಪರಾಧ ಮಾಡಿದೆವೇನೋ  ಎಂಬಂತಹ  ಚಿಂತೆಯಲ್ಲಿಯೇ ಮುಳುಗುತ್ತೇವೆ.


-  Response -Ability  ಯನ್ನು  ನನ್ನ ಜೀವನದಲ್ಲಿ  ಅಳವಡಿಸಿದ್ದರೆ  ಹಲವಾರು responsibility   ನನ್ನದಾಗುತಿತ್ತು     ಆದ್ದರಿಂದ  ಬಹಳ  ಜವಾಬ್ಧಾರಿಯುತ ಮನುಷ್ಯನಾಗುತ್ತಿದ್ದೆ.
- Sum  ಯೋಜನೆಗಳು  ಅಳವಡಿಸಿದ್ದರೆ  ಇನ್ನೂ ಬದುಕಿನ ಹಲವಾರು  ಸಂಯೋಜನೆಗಳು ಆಗುತಿತ್ತು.
 -  ವರುಷಕ್ಕೊಂದು  ರೆಸಲೂಶನ್  ಮಾಡೋ ಬದಲು  ಪ್ರತೀ ಕಾರ್ಯ ಶುರು ಹಚ್ಚ ಬೇಕಾದರೆ  ಕೆಲಸ ಕಾರ್ಯಗಳನ್ನ  ಬ್ರೇಕ್   ಡೌನ್  ಮಾಡಿ , ಅದಕ್ಕೂ ರೆಸಲೂಶನ್ ಮಾಡಿ ..ಗುರಿ ಮಿಗಿಸಿ .ಕೈತೊಳೆಯಬಹುದಿತ್ತು.
- ರಿಸ್ಕು  ತಕ್ಕೊಂಡು ಕೆಲವಾದರೂ ಕೆಲಸ ಮಾಡಿದಿದ್ದರೆ  ಜೀವನದಲ್ಲಿ  ಹಲವಾರು ರಸ್ಕು ತಿನ್ನುತಿದ್ದೆ.
- ಕ್ರಿಯೆಗಳ ಚೀಲಗಳಿರುತ್ತಿದ್ದರೆ...ಕ್ರಿಯಾಶೀಲನಾಗುತ್ತಿದ್ದೆನೋ..?  ಕ್ರಿಯಾಶೀಲನಾಗಿದ್ದಿದ್ದರೆ...ಕ್ರಿಯೆಗಳ  ಚೀಲವಿರುತ್ತಿದ್ದವೋ...?
-  ಮುಂಚೆ ಯೇ   ಯೋಚನೆ ಮಾಡಿದಿದ್ದರೆ   ಮಿಂಚಿನಂತೆ  ಎಲ್ಲವನ್ನೂ  ನಿಭಾಯಿಸಬಹುದಿತ್ತು.....
- Active   ಆಗಿ  ಬೆಳೀತಿದ್ದರೆ   Reactive   ತನ ವೇ  ಇರುತಿರಲಿಲ್ಲ....

ಸಸಿ ಚೆನ್ನಾಗಿ ಬೆಳೆಯಲು  ಗುಂಡಿ ತೋಡಿ ಅದರಲ್ಲಿ ನೆಟ್ಟು  ನಂತರ  ಭದ್ರವಾಗಿ  ಬೆಳೆಯುತ್ತದೆ,ನಂತರ  ನೆರಳನ್ನೂ ಕೊಡುತ್ತದೆ ...ಆದರೆ ಮನುಷ್ಯನಿಗೆ ಎರಡೇ ಆಯ್ಕೆ....ಅವನ ದೌರ್ಬಲ್ಯ  ಗುಂಡಿಯಲ್ಲಿದ್ದರೆ  ತಾನು ಮೇಲೆ  ಏರುತ್ತಾನೆ,ಇನ್ನೂ ಮೇಲೆ ಏರಿದನೋ ತನ್ನ ನೆರಳಿಗೂ ಬಾಡಿಗೆ ಕೇಳುತ್ತಾನೆ. ದೌರ್ಬಲ್ಯವೇ  ಮೇಲೆ  ಇದ್ದರೆ  ತಾನು ಗುಂಡಿಯಲ್ಲಿರುತ್ತಾನೆ.




   

Saturday 3 December 2011

ಪ್ರಾಮುಖ್ಯತೆಗಳನ್ನ sort ಮಾಡಿದ್ದೀವಾ..?

    
                           ಪ್ರಾಮುಖ್ಯತೆಗಳನ್ನ    sort    ಮಾಡಿದ್ದೀವಾ..?   

 ತುಂಬಾ ಒಡನಾಡಿ ..ಆದರೆ ಅವನ ಮನೆಯ ಸಮಾರಂಭಕ್ಕೆ ಹೋಗಲಾಗಲಿಲ್ಲ.ಎಷ್ಟೋ ದಿನದಿಂದ ಕೊಂಡುಕೊಳ್ಳಬೇಕೆಂದು ಕೊಂಡ ವಸ್ತು ಕೊಂಡುಕೊಳ್ಲೋಕಾಗಲಿಲ್ಲ.  ಮನೆಯ ಜಗಲಿಯಲ್ಲಿ  ಒಂದು ಫ್ರೇಮು  ಇಡಬೇಕಂದುಕೊಡಿದ್ದು ಉಹುಂ ಅಲ್ಲಿ  ಏನೂ ಇಲ್ಲ ಖಾಲಿ. ಅದೊಂದು ಇನ್ಶ್ಯುರೆನ್ಸು ಪಾವತಿಸಬೇಕಾಗಿದ್ದು ಅರ್ಧದಲ್ಲೇ ಬಾಕಿ, ಮುಂದೆ ನೋಡೋಣಾ  ಅಂದಿದ್ದು ಮತ್ತೆ ನೋಡಿದ್ದೇ ಇಲ್ಲ,  ಅದೊಂದು ಅಸ್ಸೆಟ್ಟು ಸ್ವಂತದ್ದೂ   ಅಂತ ಬೇಕು ಅಂದಿದ್ದು ಇನ್ನೂ ಸ್ವಂತದ್ದಲ್ಲ, ಇನ್ನೊಂದು ಕೊರ್ಸುಗೆ  ಸೇರಬೇಕೆಂದಿರುತ್ತೀವಿ  ಆದರೆ ಆ ಕೋರ್ಸು ಶುರುವಾಗಿ ಮುಗಿದು ಹೋಗಿರುತ್ತದೆ.

ಅಮ್ಮನನ್ನು ನೋಡಿ! ನಾಳೆಗೆ ತಿಂಡಿ ಏನು ಅಂತ ಇವತ್ತೇ ಲೆಕ್ಕ ಹಾಕಿರುತ್ತಾಳೆ. ಮಗುವಿನ  ಸಮವಸ್ತ್ರ ಒಗೆದಾಗಿದೆಯಾ  ಅಂತ ನೋಡುತ್ತಾಳೆ. ಮನೆಯವರು ಬೆಳಗ್ಗೆ ಬೇಗ ಬಸ್ಸಿಗೆ  ಹೋಗಬೇಕಾ ಅಂತ  ಅಲರಾಮು ಇಟ್ಟಿರುತ್ತಾಳೆ. ಮಕ್ಕಳಿಗೆ ಪರೀಕ್ಷೆಯ ಸಮಯವಾ ಎಂದು ಎಚ್ಚರಿಸಲು ಮರೆಯದಿರುತ್ತಾಳೆ.  ಅಪೂರ್ವಕ್ಕೆ ನೆಂಟರು ಬಂದರೆ...ಎಂದು  ಸ್ವೀಟನ್ನು ಬಚ್ಚಿಟ್ಟಿರುತ್ತಾಳೆ.

ಒಡನಾಡಿಯ ಸಮಾರಂಭಗಳಿಗೆ ಹಾಜರಿ ಹಾಕುವುದು, ವಸ್ತುಗಳನ್ನು ಕೊಂಡುಕೊಳ್ಳುವುದು, ಮತ್ತೆ ನೋಡೋಣ ಅಂದಿದ್ದನ್ನ ಗಮನ ಹರಿಸುವುದು, ಇನ್ಶ್ಯೂರೆನ್ಸು  ಪಾವತಿಮಾಡುವುದು, ಅಸ್ಸೆಟ್ಟು ಸ್ವಂತ  ಗೊಳಿಸುವುದು, ಬೇಕಾದ ಕೋರ್ಸಿಗೆ ಸೇರುವುದು, ಇವೆಲ್ಲ ಆಗದೆ ಇರುವ  ಟಾರ್ಗೆಟು  ಗಳಲ್ಲ .ಆದರೆ ಇವೆಲ್ಲ ಮುಗಿಸಿದ್ದರೆ  ಅಪೂರ್ಣ  ಎಂಬುವುದು ಬರುತ್ತಿರಲಿಲ್ಲ.

ನಾಳೆಗೆ ಏನು  ಮಾಡಬೇಕೆಂದು ಇವತ್ತೇ ಯೋಚಿಸಿರುವುದು , ಸಮವಸ್ತ್ರ  ರೆಡಿನಾ ಅಂತ ವಿಚಾರಿಸಿರುವುದು, ಬೇಗ ಕೆಲಸ ಶುರುಹಚ್ಚುವವರಿಗೆ  ಅಲರಾಮು ಇಟ್ಟುಕೊಳ್ಳುವುದು,ಮಕ್ಕಳ ಪರೀಕ್ಷೆಯ  ಬಗ್ಗೆ ಗಮನ ಹರಿಸುವುದು, ಇದೊಂದು ಸವಾಲಿನ ಕೆಲಸವಾದರೂ ಎಲ್ಲವನ್ನ ಸರಿಯಾದ ಸಂಧರ್ಭಕ್ಕೆ ನಿಭಾಯಿಸಿಟ್ಟಿರುತ್ತಾಳೆ. ಬಹುಷಃ  ಕೆಲವು  ವಿದೇಶಗಳಲ್ಲಿ  ಇದಕ್ಕೆಯೇನೋ  ಗೆಳತಿಯಾಗಿರುತ್ತಾರೆ, ಮಡದಿ ಯಾಗಿರುತ್ತಾರೆ  ,.ಆದರೆ 'ಅಮ್ಮ'ಆಗಲು ಹಿಂಜರಿಯುತ್ತಾರೆ.  ಯಾವ  MBA
ಯೂ  ಮಾಡದೆ ಇದ್ದ     ಅಮ್ಮ ಎಲ್ಲವನ್ನೂ ನಿಭಾಯಿಸುತ್ತಾಳೆ. ಅವಳು ಪ್ರಾಮುಖ್ಯತೆಗಳನ್ನ 
 'ಅಂಗಡ-ವಿಂಗಡ' ಮಾಡಿರುತ್ತಳೆನೋ..?

ಕೆಲಸಗಳ  ಬಗ್ಗೆ ನಿಗಾ ಇಲ್ಲದೆ , ಪ್ರಾಮುಖ್ಯತೆಗಳ  ಪ್ರಯೋರಿಟೈಸು ಮಾಡದೆ , ಕೆಲಸಗಳ
 'ಅಂಗಡ-ವಿಂಗಡ'   ಮಾಡದೆ ಇದ್ದಾಗ  ಸಣ್ಣ ಸಣ್ಣ ಅಂದುಕೊಂಡ  ನಮ್ಮ ದೊಡ್ಡ ಕೆಲಸಗಳು  ಅಲ್ಲೇ ಬಾಕಿಯಾಗುತ್ತವೆ ಇಲ್ಲಾ ಸರಿಯಾದ ಸಂಧರ್ಭದಲ್ಲಿ ಪೂರ್ಣ ವಾಗಿರುವುದಿಲ್ಲ.

ನನ್ನ ಸಣ್ಣ ಸಣ್ಣ ಕೆಲಸಗಳು , ಪ್ರಾಮುಖ್ಯತೆಗಳನ್ನ sort  ಮಾಡದೆ ಜೀವನವೆಲ್ಲ  'ನಚ್ಚಿ-ಗುಜ್ಜಿ' ಯಾಗಿದೆ  ...ಯಾವಾಗ   ಪ್ರಾಮುಖ್ಯತೆಗಳನ್ನ   sort   ಮಾಡುತ್ತೀನೋ....?

Saturday 26 November 2011

ಬದಲಾವಣೆ ಮತ್ತು ..ವಿಕಾಸ...

                                                   ಬದಲಾವಣೆ ----->ವಿಕಾಸ...

ಹುಳ ನೋಡು ನೋಡುತಿದ್ದಂತೆ  ಪತಂಗವಾಗಿ ಹಾರಿಬಿಡ್ತು,  ಮೊದ ಮೊದಲು ಬೊಂಬೆಯೊಂದಿಗೆ  ಆಟಿಕೆಯೊಂದಿಗೆ  ಆಟವಾಡುತಿದ್ದ ಹುಡುಗಿ ಮೊಡವೆ ಬಂದೊಡನೆ ತಕ್ಷಣ ಯಾಕೋ  ಒಳಗೇ ನಾಚಿಕೆಗೆ ನಾಂದಿ ಹಾಡುತ್ತಾಳೆ. ಒಂದು ಮಗುವಾದ ಮೇಲೆ ತಕ್ಷಣ  ನಾಚಿಕೆಗೂ ಇವಳಿಗೂ ಯಾವುದೇ ಸಂಭಂಧವೇ ಇಲ್ಲದಂತೆ ತನ್ನದೇ ಜವಾಬ್ಧಾರಿಯೆಡೆಗೆ ಮುಖ ಮಾಡಿರುತ್ತಾಳೆ. ಕಲಿತ ಶಾಲೆಗೆ  ನಾಲ್ಕು ವರ್ಷ ನಂತರ ಒಮ್ಮೆಯಾದರೂ ಹೋಗಿ ನೋಡಿ  ನಮ್ಮ ಎದೆವರೆಗೆ ಬರುತಿದ್ದ ಡೆಸ್ಕು ಬೆಂಚು  ನಮ್ಮ ಮೊಣಕಾಲಿಗೆ   ಬಂದಿರುತ್ತೆ. ನಮಗೆ ಪಾಠ ಹೇಳಿಕೊಟ್ಟ  ಮೇಷ್ಟ್ರ ಕಪ್ಪಗಿನ ಕೂದಲು ಬಿಳಿಯಾಗಿ  ಅನುಭವವನ್ನ ತೋರಿಸುತ್ತಾ ಇರುತ್ತದೆ. ತೆಳು ದನಿಯಲ್ಲಿ ಮಾತನಾದುತಿದ್ದವನು  ಅದೇನೋ ಎರಡುವರ್ಷ ಕಳೆದ ಮೇಲೆ ಮಾತನಾಡುವಾಗ ಗಡಸು ಸ್ವರದಲ್ಲಿ ಮಾತನಾಡುತ್ತಾನೆ..ನಯವಾಗಿದ್ದ ಗಡ್ಡ  ಶೇವು  ಮಾಡುತ್ತಿರುವ ಗಡ್ಡ ವಾಗಿರುತ್ತದೆ.

ಚಿಕ್ಕಮಗಳು ಅಪ್ಪನಲ್ಲಿ ಒಪ್ಪಿ ಕೇಳಿತಂತೆ..ಸ್ವಲ್ಪ ಸಮಯವಾದನಂತರ ಗಂಡನಲ್ಲಿ...ಇನ್ನು ಸ್ವಲ್ಪ ಸಮಯವಾದನಂತರ   ಮಗುವಿನಲ್ಲಿ....ಇನ್ನು ಮುಂದೆ ಹೋದನಂತರ ಪುಳ್ಳಿಯಲ್ಲಿ..(ಮಗುವಾದ ನಂತರ ಅಪ್ಪನಲ್ಲಿ,...ಪುಳ್ಲಿಯಾದನಂತರ  ಮಗನಲ್ಲಿ....ಉಹುಂ !  ಬೇಡ...ಅದಕ್ಕೆ!)

ಇದೆಲ್ಲಾ  ಬದಲಾವಣೆ ಇಲ್ಲೊಂದು   ವಿಕಾಸ.

ಬದಲಾವಣೆ -ವಿಕಾಸ  ಎರಡು  ನಾಣ್ಯಗಳ   ಮುಖದಂತೆ , (sides  of  the Two  coins  , not just   like    Two sides of  A  coin . ) ಬದಲಾವಣೆಗೊಂದು   ಮೌಲ್ಯವಾದರೆ ..ವಿಕಾಸಕ್ಕೆ ಇನ್ನೊಂದು ಮೌಲ್ಯ. ಎಲ್ಲಾ ವಿಕಾಸವೂ ಒಂದು ಬದಲಾವಣೆ ಕಂಡಿದೆ... ಆದರೆ ಎಲ್ಲ ಬದಲಾವಣೆ ವಿಕಾಸವನ್ನು ಹೊಂದಬೇಕೆನಿಲ್ಲ. ವಿಕಾಸವಾಗಬೇಕೆಂದು ಜೀವನದಲ್ಲಿ ಅದೆಷ್ಟೊಂದು ಬದಲಾವಣೆಗಳನ್ನು ಮಾಡುತ್ತೀವಿ, ಅವುಗಳೆಲ್ಲ ಬದಲಾವಣೆಯೇ  ಆಗಿ ಇರುತ್ತವೆಯೇ ಹೊರತು ವಿಕಾಸವಾಗಿರುವುದಿಲ್ಲ. ಬದಲಾವಣೆಯ  frequency  ಜಾಸ್ತಿಯಾದರೆ ಕೊನೆಗೆ ಚಂಚಲವಾಗಿ ಬಿಡುತ್ತವೆ.
ವಿಕಾಸ - ಬದಲಾವಣೆ ಯಿಲ್ಲದ ನಮ್ಮ ಬದುಕು  ನಿಂತಲ್ಲೇ ನಿಂತಿರುತ್ತದೆ. ಗ್ಯಾರೇಜಿನಲ್ಲಿರುವ  ಯಾವುದೋ  ಜಮಾನದ ಟಯರಿನಂತೆ...  ಇತ್ತ ಹೆಚ್ಚ ಸವೆಯುತಿರುವುದಿಲ್ಲ, ಬಲ ಹಾಕದೆ ಮುಂದೆ ಉರುಳೋದೂ ಇಲ್ಲ . ಜಡತ್ವದಿಂದ  ಹೊರಬಂದಿರುವುದಿಲ್ಲ, ಹೊರಬರುವುದೂ ಇರುವುದಿಲ್ಲ. ಬೇರೊಂದು ಸಿದ್ಧಾಂತವನ್ನೇ ಒಪ್ಪಬೇಕೆಂದು ಹೇಳುತ್ತಿಲ್ಲ.ಯಾವುದೋ ಒಂದು ಸಿದ್ಧಾಂತಕ್ಕೆ  ಅಂಟಿಕೊಂಡು - ಜಂಟಿಕೊಂಡು ಇರುವುದರಿಂದ, ನಮ್ಮ ಅಭಿಪ್ರಾಯ/ಸಿದ್ಧಾಂತದ  ನವೀಕರಣಕ್ಕೂ ಯೋಚನೆಯೇ ಮಾಡಿರುವುದಿಲ್ಲ. ನವೀಕರಣ ಮಾಡದ ಹೊರತು ಬದಲಾವಣೆಗೆ  ಅವಕಾಶವಿದೆಯಷ್ಟೇ ಹೊರತು ವಿಕಾಸಕ್ಕಿಲ್ಲ.
 ಹಲವು ಸಲ  ನಮ್ಮ ಒಳ್ಳೆಯ  ಆಸೆ , ಬಯಕೆಗಳು  ನಮ್ಮನ್ನ ವಿಕಸಿಸುತ್ತದೆ. ಬಯಕೆಗಳನ್ನು ಕಾರ್ಯರೂಪಗೊಳಿಸುವಾಗ ಹಲವಾರು ಪಾಠಗಳನ್ನ,ಜೀವನಾಂಶಗಳನ್ನ, ಮೌಲ್ಯಗಳನ್ನ,ಬದಲಾವಣೆಗಳನ್ನ ನಮ್ಮದಾಗಿಸುತ್ತೀವಿ. ಬಯಕೆಗಳನ್ನ ಕಾರ್ಯರೂಪಗೊಳಿಸಲು ಪ್ರಯತ್ನಿಸದೇ ಇದ್ದಾಗ ಅವುಗಳು 'ಬಯಕೆಗಳೇ' ಆಗಿ  ಇರುತ್ತವೆ. ತಿಳಿಯಬೇಕಾದ ಪಾಠ,ಸೇವಿಸಬೇಕಾದ  ಜೀವನಾಂಶ,ಪಡೆಯಬೇಕಾದ ಮೌಲ್ಯಗಳನ್ನ, ಆಗಬೇಕಾದ ಬದಲಾವಣೆಗಳನ್ನ ಎಲ್ಲೋ ಕಳಕೊಳ್ಳುತ್ತೀವಲ್ವಾ..? 

ನಾನಂತೂ   ನನ್ನ  ಜಡತ್ವದಿಂದ ಹೊರಬಂದಿಲ್ಲ.....ಯಾವಾಗ ಹೊರ  ಬರುತ್ತೀನೋ..?