Sunday 7 August 2016

ಕರ್ಣನಾರೆಂದ .....?




                                                       ಕರ್ಣನಾರೆಂದ .....?
ಭಗವಾನ್   ವೇದವ್ಯಾಸ ನ   ರಚನೆಯೇ   ವಿಷಿಷ್ಟವಾದದ್ದು . ಪ್ರಮುಖಪಾತ್ರಗಳು  ದ್ವಿಗುಣವನ್ನು  ಅಳವಡಿಸಿಕೊಂಡಿದೆ. 
ನಾಯಕನಲ್ಲಿ -ಖಳನಾಯಕತ್ವ , ಖಳನಾಯಕನಲ್ಲಿ -ನಾಯಕತ್ವ ,ವೈರಿಯಲ್ಲಿ  ಸ್ನೇಹತ್ವ ,ದಾಯಾದಿಗಳಲ್ಲಿ ವೈರತ್ವ ... 

ಕರ್ಣ ಪರ್ವ ದಲ್ಲಿ  ಕರ್ಣ ತನ್ನ ದಾಯಾದಿಯೇನೋ  ಎಂಬ  ಸಂಶಯವನ್ನ ಅರ್ಜುನ  ಕೃಷ್ಣನಲ್ಲಿ ಕೇಳುವ  ಒಂದು ಸನ್ನಿವೇಶ... 

         ದೇವ ಹಗೆಯಾಗಿರನು ಕರ್ಣನಿ
         ದಾವ ಹದನೆಂದರಿಯೆ ಮನದಲಿ
         ನೋವು ಮಿಗುವುದು ಕೈಗಳೇಳವು ತುಡುಕುವೆಡೆ ಧನುವ
          ಜೀವವೀತನಮೇಲೆ ಕರಗುವು
         ದಾವ ಸಖನೋ  ಶತ್ರುವೆಂಬೀ
         ಭಾವನೆಯ  ಬಗೆ ಬೀಳುಕೊಂಡುದು ಕರ್ಣನಾರೆಂದ ....?
******************************************
ದೇವಾ  ಈತ   ನಮಗೆ  ವೈರಿಯಾಗಿರನು ,ಯಾವ ಬಂಧ  ಎಂದು  ಅರಿಯೆ ,ಈತನ ಮೇಲೆ ಅನುಕಂಪ ಇದೆ ,ಈತನ ಮೇಲೆ  ಬಾಣ ಹೂಡಲು ಕೈಗಳು ಮೇಲೇಳುತ್ತಿಲ್ಲ ...ಇವನು ಯಾಕೆ ನಮ್ಮ ಶತ್ರು ಎಂದು  ಶಂಕೆ ಉಂಟಾಗಿದೆ... ಕೃಷ್ಣ ಕೃಪೆ ತೋರು  ಯಾರು ಈ ಕರ್ಣ? ಈತ ನನ್ನ ಸೋದರ  ಸಂಬಂಧಿಯೇ ..?ಕೃಷ್ಣ  ಹೇಳು ನಿಜವಾಗಿ ಈ ಕರ್ಣ ಅಂದರೆ ಯಾರು? ಆತನಿಗೂ ನನಿಗೂ ಏನು ಸಂಬಂಧ?
******************************************
        ಕೌರವನ ಮೇಲಿಲ್ಲದಗ್ಗದ
        ವೈರವೀತನ ಮೇಲೆ  ನಮಗಪ
        ಕಾರಿಯೀತನು ಮರಣದ ನುಸಂಧಾನವಿನ್ನೆಬರ
        ವೈರವುಪಶಮಿಸಿತು  ಯುಧಿಷ್ಠಿರ
        ವೀರನಿಂದಿಮ್ಮಡಿಯ ನೇಹದ
        ಭಾರವೆಣೆ ತೋರುವುದಿದೇನೈ  ಕರ್ಣನಾರೆಂದ ..?
******************************************
ಕೌರವನ ಮೇಲೆ ಇಲ್ಲದ ವೈರತ್ವ ಇವನಲ್ಲಿ ಇತ್ತು  .ಕರ್ಣನ ಕೊಲ್ಲದೆ   ಗಾಂಢೀವ  ಧನಸ್ಸನ್ನ ವಿಶ್ರಾಂತಿಯಲ್ಲಿಡಲಾರೆನು  ಎಂದು ಪ್ರತಿಜ್ಞೆ ಮಾಡಿದವನು  ನಾನು .ನನ್ನ ಪ್ರತಿಜ್ಞೆಯನ್ನ "ರಾಜಿ " ಮಾಡಿಕೊಳ್ಳಲಾ..?ಯುಧಿಷ್ಠಿರ ವೀರನ ಒಂದು ಹನಿ ರಕ್ತ ಧರೆಗಿಳಿದರೆ ,ರಕ್ತ ಧರೆಗಿಳಿಸಿದವನ ಯಮಪುರಿಗಟ್ಟುವೆನೆಂದು ಶಪಥ ಮಾಡಿದವನು ನಾನು  ಆ ಶಪಥವನ್ನ   ಯುಧಿಷ್ಠಿರ ವೀರ ನ  ಬದಲು  ಕರ್ಣ ವೀರ  ಎಂಬ  ಹೆಸರಿಗೆ ಎಂದು  ಬದಲಿಸಲಾ.?ಕೃಷ್ಣ ದೇವಾ ಹೇಳು ಈ ಕರ್ಣ   ಯಾರು ? ಯುಧಿಷ್ಠಿರ ವೀರ ನಿಂದಲೂ  ಹತ್ತಿರದವನಾ..? ನನಗೆ ಅನುಕಂಪ ಬರುತ್ತಾ ಇದೆಯಲ್ಲಾ?
******************************************
 
         ಆಸುರದ ವ್ಯಾಮೋಹವಿದು ಡೊ
         ಳ್ವಾಸವೋ ಕೌರವರ  ಥಟ್ಟಿನ
         ವೈಸಿಕವೋ  ನಿಮ್ಮಡಿಯ  ಮಾಯಾಮಯದ ಮಾಲೆಗಳೋ
         ವಾಸಿ ಬೀತುದು ಛಲಗಿಲದ  ಕಾ
         ಳಾಸ  ಸೋತದು  ಕರ್ಣನಲಿ ಹಿರಿ
         ದಾಸೆಯಾಯಿತು ಕೃಷ್ಣ  ಕರುಣಿಸು  ಕರ್ಣನಾರೆಂದ ....?

        ಕಾಲಯವನನುಪಾಯದಿಂದವೆ
        ಬೀಳಿಸಿದೆ ಮಾಗಧನನಾ  ಪರಿ
       ಸೀಳಿಸಿದೆ  ಬೀಷ್ಮಾದಿಗಳ ಸೋಲಿಸಿದೆ ಸಾಮದಲಿ
       ಡಾಳನತಿ ಡೊಂಕಣಿಯ ಠಕ್ಕಿನ
       ಠೊಳಿಕಾರನು ನಿನ್ನ ಮಾಯೆಯ
       ಹೇಳಲೆಮ್ಮೆನು ಕೃಷ್ಣ  ಕರುಣಿಸು  ಕರ್ಣನಾರೆಂದ ....?
******************************************
ಕಾಲ ಯಮನನ್ನು ಸೋಲಿಸಿದೆ, ಮಾಗಧನನ್ನು ಸೀಳಿಸಿದೆ, ಭೀಷ್ಮಾದಿಗಳನ್ನ ಸೋಲಿಸಿದೆ ,ಡೊಂಕಿಣಿ  ಠಕ್ಕಿಣಿಯರನ್ನ,, ವಿಶ್ವದ ವೀರಾದಿ ವೀರರನ್ನು  ಸದೆಬಡಿದೆ. ಇದಕ್ಕೆ ಕಾರಣ  ದೇವಾದಿ ದೇವಾ  ನೀನಲ್ಲವೇ?
ಕರುಣಿಸು ದೇವಾ  ಈ  ಕರ್ಣ ಯಾರು? ಈತನಲ್ಲಿ  ನನಗೆ ವೈರತ್ವವಿಲ್ಲ ಈಗ. ಈತ ನನ್ನ  ದಾಯಾದಿ ಯಂತೆ ಭಾಸವಾಗುತದಲ್ವೇ?ಕಾರಣ ಏನು ಕೃಷ್ಣ ?
******************************************

      ಋಷಿಗಳನುಮತದಿಂದ  ಕುಂತಿಯ
      ಬಸುರಲೇನುದಯಿಸನಲೆ ನೀ
      ನಸುರರಿಪು ಬಹುಕಪಟನಾಟಕ  ಸೂತ್ರಧಾರನಲೆ
      ವಸುಮತಿಯ ಭಾರವನು ಸಲೆ  ಹಿಂ
      ಗಿಸುವ  ಕೃತ್ಯವು  ನಿನ್ನದೆನಗು
     ಬ್ಬಸವಿದೆನಂದರಿಯೆನಕಟಾ  ಕರ್ಣನಾರೆಂದ .....?
******************************************
ಮಹರ್ಷಿಗಳ  ವರದಿಂದ  ಕುಂತಿಯ  ಗರ್ಭದಲ್ಲಿ ಹುಟ್ಟಿದವನು ಈತನಲ್ಲವೇ? ಸೂತ ಪುತ್ರ ಎಂದು ಯಾವ ಅಂಶವೂ ಕಾಣುವುದಿಲ್ಲ. ಈತನ ಪರಾಕ್ರಮ ಬಹಳ ಮೇರು,ಇವನ ಚರ್ಯೆ ಗಳನ್ನ ಗಮನಿಸಿದರೆ ಒಂದರ್ಧದಲ್ಲಿ ಯುಧಿಷ್ಠಿರ, ಇನ್ನೊಂದರ್ಧಲ್ಲಿ  ಪರಾಕ್ರಮಿ ಅಭಿಮನ್ಯು  ವನ್ನ  ಕಂಡಂತೆ ಭಾಸವಾಗುತ್ತದೆ . ದೇವಾದಿ ದೇವಾ ಕೃಷ್ಣ  ನೀನು ಕಪಟ ನಾಟಕ ಸೂತ್ರಧಾರಿ ,ಭೂಮಿಯ ಭಾರವನ್ನು  ತಗ್ಗಿಸೀಲೆಂದೇ ಧರೆಗಿಳಿದವನು ,ನನಲ್ಲಿ  ನಿಜಾಂಶವನ್ನ ಮುಚ್ಚಿಡದೆ  ಕರ್ಣ  ಯಾರೆಂದು  ಹೇಳು  ಕೃಷ್ಣ  ದಯ ತೋರು...!!!
******************************************
     ಧರೆಯ  ಬಿಡುವೆನು ಕುರುಪತಿಗೆ  ನಾ
     ವರುವರೊಡಹುಟ್ಟಿದವರು ವಿಪಿನಾಂತರದೊಳಗೆ
     ಭಜಿಸುವೆವು  ನಿನ್ನನು  ಭಾವಶುದ್ದಿಯಲಿ
     ತೆರಳುವೀಸಿರಿಗೋಸುಗರ  ಸೋ
     ದರನ  ಕೊಲುವೆನೆ ಕೃಷ್ಣ  ಕರಣಿಸು
    ಕರುಣಿಸಕಟಾ ಕೃಷ್ಣ  ಕರಣಿಸು  ಕರ್ಣನಾರೆಂದ .....?

     ದೂರುವವರಾವಲ್ಲ  ಕರುಣವ
    ತೋರಿ ಬಿನ್ನಹ ಮಾಡಿದೆನು  ಹಗೆ
    ಯೇರದಿವನಲಿ  ಸೇರುವುದು  ಸೋದರದ  ಸಂಬಂಧ
    ಆರೆನೀತನ  ಕೊಲೆಗೆ  ಹೃದಯವ
   ಸೂರೆಗೊಂಡನು  ಕರ್ಣನಕಟಾ
  ತೋರಿ ನುಡಿಯಾ  ಕೃಷ್ಣ    ಕರಣಿಸು  ಕರ್ಣನಾರೆಂದ .....?
******************************************************

ಇಡೀ  ಧರೆಯನ್ನ  ಕೌರವನಿಗೆ  ಕೊಡುತ್ತೇ ನೆ . ಪಾಂಡವರು  ಐವರಲ್ಲ ,ಆರುಮಂದಿ  ಎಂದು  ಘೋಷಿಸಿ ,ಆರೂವರು  ಒಡಗೂಡಿ ನಿನ್ನನ್ನ ಭಾವ ಶುದ್ಧಿಯಲ್ಲಿ ಭಜಿಸುತ್ತೇವೆ ,ಕ್ಷಣಿಕವಾದ ಈ ಸಂಪತ್ತಿಗೆ ,ನನ್ನ  ಅಣ್ಣ ನನ್ನ ಕೊಲ್ಲಬೇಕೆ ?ಈವರೆಗೆ ನಡೆದ  ಘಟನೆಯನ್ನೆಲ್ಲ ಬದಿಗೊತ್ತಿ ,ಒಣ  ಪ್ರತಿಜ್ಞೆಯನ್ನೆಲ್ಲ ಮರೆತು ಇವನನ್ನ ಕೊಲ್ಲಲಾರೆ ಕೃಷ್ಣ . ಸಲಹು  ಈ ಕರ್ಣ ಯಾರು ? ಅವನಿಗೂ ಪಾಂಡವರಿಗೂ  ಏನು ಸಂಬಂಧ?
******************************************************