Saturday 22 October 2011

ನೈಪುಣ್ಯತೆಯನ್ನು ಅರಸುತ್ತಾ....

                                          ನೈಪುಣ್ಯತೆಯನ್ನು  ಅರಸುತ್ತಾ....  

ನಾನು  ನನ್ನ ಡೊಮೈನ್ ಬದಲಾಯಿಸುತ್ತೀನಿ, ಇರುವ ಉದ್ಯೋಗವನ್ನು ಬಿಟ್ಟು  ಬೇರೊಂದನ್ನು ನೋಡುತ್ತೀನಿ, ಈ ಕೆಲಸ ನೆಟ್ಟಗಿಲ್ಲ ನೆಟ್ಟಗಿರೋದನ್ನು ಆರಿಸುತ್ತೀನಿ. ಹೀಗೆ ಇರುವ ಜಾಗದಲ್ಲಿ ,ಇರುವ ಕೆಲಸಗಳಲ್ಲಿ ,ಮಾಡುವ ಕಾರ್ಯಗಳಲ್ಲಿ  ದಿನೇ ಅಲವತ್ತು ಕೊಳ್ಳುವುದನ್ನು  ರೂಡಿ ಮಾಡಿಕೊಂಡಿರುತ್ತೀವಿ.
ನೀವು ಶೇವಿಂಗ್  ಮಾಡಿಸಲು ಹೋದಾಗ  ಯಾವಾಗಲು ನಿಮ್ಮನ್ನ ಶೇವು  ಮಾಡುವವನ ಹೊರತು ಇನ್ನೊಬ್ಬ ಮಾಡಲು ಹೊರಟರೆ ಯಾಕೋ ಮನಸು ಒಪ್ಪಲ್ಲ,ಹುಬ್ಬು ಕಟ್  ಮಾಡಿಸಲು, ವ್ಯಾಕ್ಸಿಂಗ್ ಮಾಡಿಸಲು  ಹೋಗುವ ನಿಮ್ಮ ಗಟ್ಟಿಗೆತ್ತಿ ಗೆಳತಿಯರಲ್ಲಿ ,ಅಕ್ಕ ತಂಗಿಯರಲ್ಲಿ ಅವರು ಹೋಗುವುದಕ್ಕಿಂತ  ದೊಡ್ಡ ಬ್ಯೂಟಿ ಪಾರ್ಲರ್ ಗೆ ಹೋಗಲು ಸಲಹೆ ಕೊಡಿ ಆಗ ಅವಳು ಒಪ್ಪಲ್ಲ ತನಗೆ ಇಷ್ಟ ವಾಗುವಂತೆ ಚೆನ್ನಾಗಿ   ಮಾಡುವ ಸಣ್ಣ ಪಾರ್ಲರ್ಗೆ ಹೊಗುತ್ತಾಳೆಯೇ ಹೊರತು ಇಷ್ಟವಿಲ್ಲದ ದೊಡ್ಡ ಪಾರ್ಲರ್ಗೆ ಹೋಗುವುದಿಲ್ಲ .ಕಾರಣ ಇಷ್ಟೆ ಸಲೂನ್ / ಬ್ಯೂಟಿ ಪಾರ್ಲರ್ ನವರ ನೈಪುಣ್ಯತೆ . ಅವರು ಹೇಗೆ ಇರಲಿ  ಅವರ ನೈಪುಣ್ಯತೆಗೆ  ನಮಗೆ ಗೊತ್ತಿಲ್ಲದಂತೆ  ನಾವು ಗೌರವ  ಕೊಡುತ್ತೇವೆ .  ಅದು  ಎಂದಿಗೂ  ಬಲವಂತವಾಗಿ  ಪಡೆದದ್ದೂ ಆಗಿರುವುದಿಲ್ಲ . ಅವರ ಮೌಲ್ಯವನ್ನು  ಹೆಚ್ಚಿಸಿರುವುದು  ಅವರ ನೈಪುಣ್ಯದಿಂದಲೇ ! ಗಾಡಿಯ ಶಬ್ದ ಕೇಳಿಯೇ  ಯಾವ ಪಾರ್ಟ್ ಸರಿಪಡಿಸಬೇಕೆಂದು  ಒಳ್ಳೆಯ ಫಿಟ್ಟರ್  ಪತ್ತೆಹಚ್ಚ್ಚಿರುತ್ತಾನೆ ,  ಬಟ್ಟೆಯನ್ನು  ನೋಡಿ  ಎಲ್ಲಿ ಹೊಲಿಗೆ  ಸರಿಯಾಗಿಲ್ಲ ಎಂಬುದನ್ನ  ಪಳಗಿದ ಟೈಲರ್ ಹೇಳಿರುತ್ತಾನೆ ,ಮನೆಯ  ಭೀಮು ಹೀಗೇನೆ  ನಿಲ್ಲಿಸ ಬೇಕಿತ್ತು ಎಂದು ಪರಿಣತಿ ಹೊಂದಿದ ಮೇಸ್ತ್ರಿ  ಹೇಳಿರುತ್ತಾನೆ.  ಇನ್ನೂ ಹುರಿಯಬೇಕಿತ್ತು  ಎಂದು ಅಡುಗೆ ಭಟ್ರು ಹೇಳಿರುತ್ತಾರೆ.
ಮೇಸ್ತ್ರಿಗಾಗಲಿ ,ಟೈಲರಿಗೆ, ಫಿಟ್ಟರ್ ಗೆ , ಕ್ಷೌರಿಕನಿಗೆ  ಇನ್ನು ಯಾರೇ ಆಗಿರಲಿ  ನೈಪುಣ್ಯತೆ  ಗಾಳಿಯಲ್ಲಿ ಹಾಗೆ  ತೇ ..ವ..ಲಿ..ಸಿಕೊಂಡು ಬಂದಿರುವುದಿಲ್ಲ . ಕೆಲಸದಲ್ಲಿನ ಒಂಚೂರು ಹೆಚ್ಚಿನ ಶ್ರದ್ಧೆ , ಅಚ್ಚುಕಟ್ಟುತನ , ಪೂರೈಸುವಿಕೆ, ಅದೆಲ್ಲೋ ಹಿಂದಿನ ಅನುಭವದ ಜ್ಞಾಪಕ, ಇನ್ನೊಬ್ಬನಿಗೆ ಹೀಗಾಗಿದೆ ಎಂಬ ತಿಳುವಳಿಕೆ, ಕ್ರಿಯಾಶೀಲತೆ  ಇದೆಲ್ಲದರ ಪರಿಣಾಮವಾಗಿ ಅವನ ಸಾಮರ್ಥ್ಯದಲ್ಲಿ ಕೌಶಲ ತುಂಬಿರುತ್ತದೆ . ಕೌಶಲ್ಯತೆಯಿಂದ  ಮಾಡಿದ ಕೆಲಸ ಅವನಿಗಲ್ಲದೆ  ಎಲ್ಲರಿಗೂ ಸಂತೋಷವಾಗುತ್ತದೆ.ಅದಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಆಕರ್ಷಿಸುತ್ತದೆ.   ಆ ಕೆಲಸವನ್ನು  ಅಚ್ಚುಕಟ್ಟಾಗಿ  ಮಾಡಿದ ತೃಪ್ತಿ ಸಿಗುತ್ತದೆ .
 ಅದು ಇವತ್ತಿನಿಂದ ನಾಳೆಗೆ  ತಕ್ಷಣವಾಗಿ  ಬಂದಿರುವುದಿಲ್ಲ  ಎಷ್ಟೋ ಪ್ರಯತ್ನಗಳನ್ನ ತಿಂದಿರುತ್ತದೆ. ನಮ್ಮ ಇತರೆ ಆಸಕ್ತಿಗಳನ್ನ ಮುಟ್ಟುಗೋಲು ಹಾಕಿರುತ್ತದೆ, ಇತರೆ ಕೆಲಸಗಳ ಪ್ರಾಮುಖ್ಯತೆಯನ್ನ ಕಡಿಮೆ ಮಾಡಿರುತ್ತದೆ. ನಮ್ಮನ್ನ ಆ ಕೆಲಸ ಅಳವಡಿಸಿಕೊಂಡಿರುತ್ತದೆ, ಗುರುಟಿಸಿರುತ್ತದೆ. ನಮ್ಮ ಇತರ ಎಷ್ಟೋ ಆಸೆಗಳನ್ನ ಒಣಗಿಸಿರುತ್ತದೆ.
ನಮ್ಮನ್ನ  ಅಳವಡಿಸಿಕೊಂಡಿರದ , ಪ್ರಾಮುಖ್ಯತೆಗಳಿಗೆ ಕಡಿವಾಣ ಹಾಕದ, ಪ್ರಯತ್ನಗಳನ್ನೇ ತುಂಬದ ,ಇತರ ಆಸೆಗಳಿಂದಲೇ ಬೆಳೆಸಿದ, ಒಂದು ಕೆಲಸದಲ್ಲಿ  ಸ್ವಲ್ಪ ಹೆಚ್ಚಿಗೆ ಗುರುಟಿಸಿ ಕೊಳ್ಳದ  ನಮ್ಮ ಬದುಕನ್ನ ಯಾರೂ ಗುರುತಿಸದಾಗುತ್ತಾರೆ. ವಿದ್ಯೆ ಇದ್ದರೂ ಕೌಶಲ ವಿರುವುದಿಲ್ಲ.ವಿದ್ಯೆಗೆ ವಿದ್ಯಾಲಯಗಳಿವೆ ಬಹುಷಃ  ಕೌಶಲಕ್ಕೆ ವಿಶ್ವವೇ ವಿದ್ಯಾಲಯವೇನೋ..?  

ಜ್ವರ  ಬಂದರೆ  ಮೆಡಿಕಲ್ ಗೆ ಹೋಗಿ ಕ್ರೋಸಿನ್ ತಗೊಳ್ಳುತ್ತೀವಿ , ಪ್ರೆಶರ್ ಕುಕ್ಕರ್ ಬೇಕಾದರೆ ಗಿರಿಯಾಸ್ ಗೆ ದೌಡಾಯಿಸುತ್ತೀವಿ, ಬಾಯಾರಿಕೆಯಾದರೆ ಕೊಕ್ ತಗೊಂಡು  ದಣಿವಾರಿಸುತ್ತೀವಿ, ಸೀರೆ ಬೇಕಾದರೆ  ಕಾನ್ಚೀವರಂ ಟಕ್ಸ್ ಟೈಲ್ಸ್ ನಲ್ಲಿ ಬೇಕಾದಷ್ಟು ಮಳಿಗೆಗಳಿವೆ.
     
ನೈಪುಣ್ಯತೆ ಅನ್ನೋದು  ಮೇಲೆ ಹೇಳಿದಂತೆ  ತಕ್ಷಣ  ಒಂದೇ ಕಡೆಯಲ್ಲಿ  ಸಿಗುತ್ತದೆಯಂತಾದರೆ ನನಗೆ ತಿಳಿಸಲು ಮರೆಯದಿರಿ ......... ಅಲ್ಲಿಗೆ  ದೌಡಾಯಿಸಲು  ಕಾತುರನಾಗಿದ್ದೇನೆ.

1 comment: